ಶನಿವಾರ, ಮಾರ್ಚ್ 31, 2012

ಬದುಕಿನದೃಷ್ಠದಾಟವ ಬಲ್ಲವರ್ಯಾರು...??!!

4ನೇ ಭಾಗಕ್ಕಾಗಿ ಈ ಕೊಂಡಿ ಒತ್ತಿ:
http://bisilubeladinagalahudugi.blogspot.in/2012/02/blog-post_05.html


ಈ ರೀತಿ ನಾನಾ ಅಂಶಗಳನ್ನು ಮನಗಂಡ ಶಿವು ಇನ್ನೂ ಸಾಕಷ್ಟು ಗೊಂದಲದಲ್ಲೇ ಇದ್ದನು....!
ಆ ಎಲ್ಲಾ ಗುಣಗಳು ಅವಳಲ್ಲಿದೆ ಅಂತಾ ನಾನು ಅರಿತುಕೊಳ್ಳೋದು ಹೇಗೆ..??
ಎಲ್ಲಾ ಗುಣಗಳಲ್ಲದೇ ಇದ್ರೂ ಒಂದರ್ಧನಾದ್ರೂ ಇದ್ರೆ ಮಿಕ್ಕಿದ್ದನ್ನ ಹೇಳಿಕೊಡಬಹುದು..!
ಮುಖ್ಯವಾಗಿ ಅರಿತು ನಡೆಯುವ ಗುಣ ಅವಳಲ್ಲಿರಬೇಕು,, ಹೇಳಿದನ್ನು ಅರ್ಥೈಸಿಕೊಳ್ಳೋ ಶಕ್ತಿಯಾದ್ರೂ ಅವಳಲ್ಲಿರಬೇಕು..!
ನಿಜವಾಗಿಯೂ ಇಂಥಾ ಹುಡುಗಿ ಇದಾಳಾ..?? ಇದ್ರೂ ನನಗೆ ಸಿಗ್ತಾಳಾ..?? 
ನನ್ನ ಈ ಆಸೆ - ನಿರೀಕ್ಷೆಗಳಂತೆ ಅವಳಿಗೂ ಅವಳ ಹುಡುಗನ ಬಗ್ಗೆ ಕನಸು-ಕಲ್ಪನೆಗಳಿರುವುದಿಲ್ಲವೇ..??
ಅವಳ ನಿರೀಕ್ಷೆಗಳೇನಿರುತ್ತವೋ..?? ದೊಡ್ಡ ಸಿರಿವಂತನನ್ನೋ,, ಹಣವಂತನನ್ನೋ ಮದುವೆಯಾಗೋ ಆಸೆ ಇದ್ರೆ..??
ನನ್ನಂಥ ಬಡಹುಡುಗನಿಗೆ ಆಕೆ ಸಿಗಲು ಸಾಧ್ಯವೇ..??
ಏನೇ ಆಗಲಿ.., ಬೇರೆಯವರ., ಹಾಗೂ ಮನೆಯವರ ಒತ್ತಡಕ್ಕೆ ಕಟ್ಟುಬಿದ್ದು..
ಹುಡುಗಿ ಆಸೆ-ಆಕಾಂಕ್ಷೆಗಳನ್ನು ತಿಳಿದುಕೊಳ್ಳದೇ ಅವಳನ್ನು ವಿವಾಹವಾಗಲು ನಾನು ಸಮ್ಮತಿಸಬಾರದು..
ಹುಡುಗಿ ನೋಡೋಕೆ ಅಂತಾ ಹೋದ್ರೆ ಅವಳ ಬಳಿ ವ್ಯಯಕ್ತಿಕವಾಗಿ ಮಾತಾಡಿ ನನ್ನ ನಿಜ ಪರಿಸ್ಥಿತಿಯನ್ನು ಅವಳಿಗೆ ಮನವರಿಕೆ ಮಾಡಿಸಿ ಅವಳ ಸಂಪೂರ್ಣ ಒಪ್ಪಿಗೆ ಪಡೆದೇ ಮದುವೆಯಾಗಬೇಕು...??
ಆದಷ್ಟು ನನಗೆ ತಕ್ಕಂತ ಬಡಹುಡುಗಿಯನ್ನೇ ಹುಡುಕಬೇಕು,,
ಈ ಸಿರಿವಂತರ ಸಹವಾಸವೇ ನಮಗೆ ಬೇಡ..!
ನಾನೂ ಸಾಕಷ್ಟು ದುಡಿದು ಧನಿಕನಾಗಬೇಕು..! 
ಆದ್ರೆ ಬಡಹುಡುಗಿಯನ್ನೇ ಮದುವೆಯಾಗಬೇಕು...!
ಹೀಗೆ ಹತ್ತು-ಹಲವಾರು ರೀತಿಯಲ್ಲಿ ಯೋಚಿಸಿದ ಶಿವು ಕೊನೆಗೂ ಈ ಒಂದು ನಿರ್ಧಾರಕ್ಕೆ ಬಂದನು..!!


ಕೆಲವು ದಿನಗಳು ಕಳೆದಂತೆ ಇದೇ ವಿಚಾರ ಅವನ ಮನದಾಳದಲ್ಲಿ ಬೇರೂರಿಬಿಟ್ಟಿತು....!
ಆಗಾಗ ಅಕ್ಕ-ಪಕ್ಕ.., ಸುತ್ತ-ಮುತ್ತ ಕಾಣುವ ಹುಡುಗಿಯರನ್ನೊಮ್ಮೆ ಗಮನಿಸುತ್ತಿದ್ದನಾದರೂ.,
ನೋಡಿದವರು ಏನಾಂದರೋ ಏನೋ ಅಂಥಾ ಹುಡುಗಿಯರ ಕಡೆ ಜಾಸ್ತಿ ಗಮನಕೊಡದೇ..
ತಾನಾಯಿತು.., ತನ್ನ ಕೆಲಸವಾಯಿತು ಎಂದು ತನ್ನಪಾಡಿಗೆ ತಾನಿರುತ್ತಿದ್ದನು...!!


ಒಂದು ದಿನ ಬೆಳಿಗ್ಗೆ 09.00ಕ್ಕೆಲ್ಲ್ಲತನ್ನ ಪಾಡಿಗೆ ತಾನು ವ್ಯಾಪರಕ್ಕೆ ಬಂದು ತಾನು ಕೂಡುವ ಜಾಗವನ್ನು
ಸ್ವಚ್ಚಗೊಳಿಸಿ ತನ್ನ ಎಲ್ಲ ಸಲಕರಣಿಗಳನ್ನು ಜೋಡಿಸಿ ತಾನು ಕೂಡುವ ಕುರ್ಚಿ ಮೇಲೆ ಕುಳಿತು ಅಂದಿನ ದಿನ ಸಂಜೆ ಡ್ರಾ ಆಗಲಿರುವ ಟಿಕೇಟುಗಳನ್ನೆಲ್ಲಾ ಲೆಕ್ಕ ಮಾಡಿ ಹಲಗೆಯ ಮೊಳೆಗಳಿಗೆ ಹಾಕಿ,, "ಅಬ್ಬಾ..!! ಇನ್ನೂ ಇಷ್ಟೊಂದು ಟಿಕೇಟುಗಳಿವೆ ಇವತ್ತು ಇವಿಷ್ಟು ಖಾಲಿಯಾಗಲೇಬೇಕು.. ಉಳಿದುಬಿಟ್ರೆ ನಷ್ಟವಾಗಿಬಿಡುತ್ತೆ" ಅಂತಾ ಅಂದುಕೊಳ್ಳುತ್ತಾ... ಹಾಗೆ ರಸ್ತೆ ಆಚೆ ಎದುರುಗಡೆ ಇರುವ ಬೇವಿನಮರದ ಕಡೆ ದೃಷ್ಠಿ ನೆಟ್ಟನು..
ಆ ಬೇವಿನ ಮರದ ಎಲೆಗಳ ಮಧ್ಯದಲ್ಲಿಂದ ಆಗ ತಾನೇ ಬೆಳಗಿನ ಸೂರ್ಯ ರಶ್ಮಿಗಳು ಇವನ ಮುಖ ಹಾಗು ಅಂಗಡಿಯಮೇಲೆ ಬೀಳುತ್ತಿದ್ದವು.,
ಹಾಗೇ ಸ್ವಲ್ಪ ಉಲ್ಲಾಸಿತನಾಗಿ 'ಇಷ್ಟೊಂದು ಲಾಟರಿಗಳನ್ನು ಮಾರಾಟ ಮಾಡ್ತೀನಿ... ಒಮ್ಮೊಮ್ಮೆ ಮಾರಟವಾಗದೇ ಉಳಿದು ನಷ್ಟನೂ ಆಗುತ್ತೆ.. ಅಕಸ್ಮಾತ್ ಉಳಿದ ಟಿಕೇಟುಗಳಲ್ಲೇ ಒಂದೇ ಒಂದು ನನಗೆ ಬಂಪರ್ ಬಹುಮಾನ ಬಂದು ಬಿಟ್ರೇ ಎಷ್ಟೊಂದು ಚೆನ್ನಾಗಿರುತ್ತಲ್ಲಾ..??  ಆಗ ನಾನೂ ಶ್ರೀಮಂತನಾಗ್ತೀನಿ.. ನಾನು ಬಯಸಿದ್ದೆಲ್ಲಾ ಸಿಗುತ್ತಾಲ್ವಾ..??'
ಎಂದು ಹಗಲುಗನಸು ಕಾಣತೊಡಗಿದನು.. ಇದ್ದಕ್ಕಿದ್ದಂತೆ ಆ ಕನಸಿಗೆ ಭಂಗ ಬಂದಂತೆ ಏನೋ ಬಂದು ಇವನನ್ನು ಸೆಳೆದಂತಾಯಿತು.. ಆದರೂ ತನ್ನ ಬೇವಿನಮರದ ದೃಷ್ಠಿಯನ್ನು ಬದಲಾಯಿಸಲೇ ಇಲ್ಲ.. ಯಾಕೋ ಮನಸಿನಲ್ಲಿ ಕಳವಳವಾದಂತಾಯ್ತು... ನಾನೇನೋ ನನಗೆ ಸಂಬಂಧಪಟ್ಟಿದ್ದನ್ನ ಕಳೆದುಕೊಳ್ತಾ ಇದೀನಲ್ಲಾ ಅಂತಾ ಅನಿಸೋಕೆ ಶುರುವಾಯ್ತು,,, ವಿಚಲಿತನಾಗಿ ಆ ಕಡೆ.. ಈ ಕಡೆ ನೋಡತೊಡಗಿದನು... ಏನೂ ಕಾಣಲಿಲ್ಲ..! ಯಾಕೀಗಾಯಿತೆಂದು ಯೋಚಿಸಲು ಹಾಗೆ 'ಈ ಕಡೆಯಿಂದ ಯಾರೋ ನನ್ನ ಮುಂದೆ ಹಾದು ಹೋದ ಹಾಗಾಯ್ತಲ್ವೇ...??!! ಅದ್ಕೇ ಹೀಗಾಯ್ತೇನೋ' ಅಂದುಕೊಂಡು ಸುಮ್ಮನಾದನು...!!


ಈ ಲಾಟರಿ ಏಜೆಂಟ್ ರ ಬದುಕು ಹೇಗಪ್ಪಾ ಅಂತದ್ರೆ ಇವರು ಕೊಂಡು ತಂದ ಟಿಕೇಟುಗಳನ್ನೆಲ್ಲಾ  ಡ್ರಾ ಆಗೋ ಸಮಯದೊಳಗೆ ಇವರು ಮಾರಾಟ ಮಾಡಲೇಬೇಕು ಒಂದು ವೇಳೆ ಮಾರಾಟವಾಗದೇ ಉಳಿದುಕೊಂಡ್ರೆ ಅದು ಇವರಿಗೇ,,ಹಾಗೇ.., ಉಳಿದಿದ್ದರಲ್ಲೇ ಅದರ ನಷ್ಟ ಭರಿಸುವಷ್ಟು ಬಹುಮಾನ ಬಂದ್ರೆ ಒಳ್ಳೇದು ಇಲ್ಲಾ ಅಂದ್ರೆ ಇವರು ದುಡಿದದ್ದೆನ್ನೆಲ್ಲಾ ಅದ್ಕೇ ಕೊಡಬೇಕಾಗಿ ಬರ್ತಿತ್ತು.. ಒಮ್ಮೊಮ್ಮೆ ಯಾವ ಲಾಭನೂ ಇಲ್ಲದೇ ಇವರೇ ಮುಖ್ಯ ಏಜೆಂಟ್ ಗಳಿಗೆ ಬಾಕಿದಾರರಾಗಬೇಕಾದ ಪ್ರಸಂಗವಿರುತ್ತಿತ್ತು. ಅದ್ಕೇ ಕೆಲವೊಮ್ಮೆ ಯಾರಿಗಾದ್ರೂ ಖಾಯಂ ಗಿರಾಕಿಗಳಿಗೆ ಉದ್ರಿ(ಸಾಲ) ಕೊಟ್ಟು ದುಡ್ಡನ್ನು ಮತ್ತ್ಯಾವಗಲೋ ಪಡೆಯಬೇಕಾಗ್ತಿತ್ತು.. ಅದ್ಕೇ ಎಷ್ಟು ಮಾರಾಟವಾಗುತ್ತೋ ಅಷ್ಟೇ ಲಾಟರಿಗಳನ್ನು ಇವರು ಖರೀದಿ ಮಾಡಬೇಕಿತ್ತು...
ವ್ಯಾಪಾರ ಹೀಗೆ ಇರುತ್ತೆ ಅಂತಾ ಹೇಳೋಕಾಗುತ್ತಾ,..??? 
ಒಮ್ಮೊಮ್ಮೆ ಭರ್ಜರಿ ವ್ಯಾಪಾರವಾದ್ರೆ,, ಒಮ್ಮೊಮ್ಮೆ ಏನೂ ಆಗೋದೆ ಇಲ್ಲ,,, 
ನಿಯಮಿತವಾಗಿ ಬಹುಮಾನಗಳು ಬರ್ತಾ ಇದ್ರೆ ಖರೀದಿ ಮಾಡೋರಿಗೂ ಬೇಸರವಿರೋದಿಲ್ಲ... 
ಆಗ ವ್ಯಾಪಾರನೂ ಸುಗಮವಾಗಿ ನಡೆಯುತ್ತೆ... ಆದ್ರೆ.., 
ಅದೃಷ್ಠ ಯಾರಪ್ಪನ ಮನೆ ಸ್ವತ್ತೂ ಅಲ್ಲ ನೋಡಿ..?? ಅದು ತನಗಿಷ್ಠ ಬಂದವರಿಗೆ ಒಲಿಯುತ್ತೆ...! 
ಅದರಲ್ಲೂ ಕರ್ನಾಟಕ ಸರ್ಕಾರದ ಲಾಟರಿಗಳಲ್ಲಿ ಬಹುಮಾನ ಲಭಿಸುವ ಅವಕಾಶಗಳು ತುಂಬಾನೇ ಕಡಿಮೆ ಇರ್ತಾ ಇತ್ತು. ಬೇರೆ ಬೇರೆ ರಾಜ್ಯ ಸರ್ಕಾರದ ಲಾಟರಿಗಳಲ್ಲಿ ಗ್ರಾಹಕರಿಗೆ ಬಹುಮಾನ ಲಭಿಸುವ ಅವಕಾಶಗಳು ಯತೇಚ್ಚವಾಗಿರುತ್ತಿತ್ತು. ಅಲ್ಲದೇ, ಬಹುಮಾನಿತ ಟಿಕೇಟನ್ನು ಮಾರಾಟ ಮಾಡುವ ಏಜೆಂಟರಿಗೂ ಅತಿ ಹೆಚ್ಚು ಬೋನಸ್ ನ್ನು ಅನ್ಯ ರಾಜ್ಯ ಸರ್ಕಾರದ ಲಾಟರಿಗಳಲ್ಲಿ ಘೋಷಣೆಯಾಗಿರುತ್ತಿತ್ತು.! 
ಹೀಗಾಗಿ, ಗ್ರಾಹಕರಾದಿಯಾಗಿ ಏಜೆಂಟ್, ಸ್ಟಾಕಿಸ್ಟ್, ಮೇನ್ ಸ್ಟಾಕಿಸ್ಟ್ ಗಳೆಲ್ಲಾ ಅನ್ಯರಾಜ್ಯಸರ್ಕಾರದ ಲಾಟರಿಗಳನ್ನು ಹೆಚ್ಚಾಗಿ ಪ್ರೋತ್ಸಾಹಿಸುತ್ತಿದ್ದರು. 
ಹೀಗೆ ಅನ್ಯ ರಾಜ್ಯಸರ್ಕಾರದ ಲಾಟರಿಗಳ ಕೃಪೆಯಿಂದಾಗಿ ಲಾಟರಿ ಏಜೆಂಟರ ಬದುಕು ತಕ್ಕ ಮಟ್ಟಿಗೆ ಆರಕ್ಕೇರದೆ ಮೂರಕ್ಕಿಳಿಯದೆ ಸರಳ ಕಷ್ಟದಿಂದ ಜೀವನ ಸಾಗಿತ್ತು...!
ಒಟ್ಟಿನಲ್ಲಿ ಇವರ ಬದುಕೂ ಒಂಥರಾ ದುಸ್ತರವೇ..! 
'ಅದೃಷ್ಠ ಮತ್ತು ದೇವರ ಕೃಪೆ' ಸದಾ ಇವರಮೇಲಿರಬೇಕು...!


ಇಂತಿಪ್ಪ ಬದುಕಿನ ಒಡೆಯ ನಮ್ಮ ಶಿವು.. ಇಂಥಾ ಕಷ್ಟ ಸಂದರ್ಭದಲ್ಲೂ ಇವನ ವ್ಯಾಪಾರವು ಯಾವುದೇ ಕುಂದಿಲ್ಲದೇ ನಡೆಯುತ್ತಿತ್ತು, ಕಾರಣ ಇವನು ತನ್ನ ವ್ಯಾಪರಕ್ಕಾಗಿ ಆಯ್ದುಕೊಂಡಿದ್ದ ಜಾಗ ಹಾಗಿತ್ತು. 
ನಾಲ್ಕು ದಾರಿ ಕೂಡುವ ವೃತ್ತದ ಪಕ್ಕದಲ್ಲೇ ಇದ್ದ ಪೆಟ್ರೋಲ್ ಬಂಕ್ ಬಳಿಯ ಒಂದು ಮರದ ಕೆಳಗೆ ಪೂರ್ವಾಭಿಮುಖವಾಗಿ ಅಂಗಡಿ ಇಟ್ಟಿದ್ದನು. 
ಎಡ ಭಾಗದಲ್ಲಿ ಕೂಗಳತೆ ದೂರದಲ್ಲಿ ಊರಿನ ಪ್ರಮುಖ ತರಕಾರಿ ಮಾರುಕಟ್ಟೆ ಇತ್ತು. 
ಎದುರುಗಡೆ ರಸ್ತೆ, ರಸ್ತೆ ಆಚೆಬದಿಯಲ್ಲಿ ಮುಸ್ಲೀಂ ಧರ್ಮದವರ ಬೇವಿನಮರದ ದರ್ಗಾ ಕಟ್ಟೆ, 
ಅದರ ಪಕ್ಕದಲ್ಲೇ ಹಳೇ ಬಸ್ ನಿಲ್ದಾಣ., ಇಲ್ಲಿ ವ್ಯಾನ್.. ಆಟೋ,, ಎಲ್ಲಾ ನಿಂತು ಹೋಗ್ತಾ ಇದ್ದವು.
ಹಿಂದೆ ಪೆಟ್ರೋಲ್ ಬಂಕ್ ಆಫೀಸ್, 
ಬಲಗಡೆ ರಸ್ತೆಗೆ ಹೊಂದಿಕೊಂಡಂತಿರುವ ಪೆಟ್ರೋಲ್ ಬಂಕ್, 
ಹಾಗೆ.. ಅದೇ ಮಾರ್ಗವಾಗಿ ಹಿಂದೆ ಬಂದರೆ ಒಂದು 'ಹನುಮಾನ್ ಚಿತ್ರಮಂದಿರ'.
ಹೀಗೆ ಒಂದಿಲ್ಲೊಂದು ರೀತಿಯಲ್ಲಿ ವಿವಿಧ ಜನರಿಗೂ ಸರ್ವ ಅವಶ್ಯಕತೆಗಳನ್ನು ಪೂರೈಸುವ ತಾಣವಾಗಿ ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಜಾಗವದಾಗಿತ್ತು, 
ಹೀಗಾಗಿ ಸರಳ ವ್ಯವಹಾರಕ್ಕೇನೂ ತೊಂದರೆ ಇರಲಿಲ್ಲ. ಆದ್ರೂ..  
ಟಿಕೇಟುಗಳು ಉಳಿಯುವಂಥ ಸಮಯ ಬಂದರೆ ನಾಚಿಕೆಪಟ್ಟುಕೊಳದೇ ಕೂಗಿ ಕೂಗಿ ಮಾರಟಮಾಡುವದರಲ್ಲಿ ಶಿವು ನಿಸ್ಸೀಮನಾಗಿದ್ದನು.
 "ಬೇಗ ಬನ್ನಿ,, ಬೇಗ ಡ್ರಾ,, ಬೇಗ ಬೇಗ ಬಹುಮಾನ.. ಒಳ್ಳೆ ನಂಬರ್ ಟಿಕೇಟ್ ಇದೆ ಈಗಲೇ ಕೊಳ್ಳಿ , 
ಅದೃಷ್ಟ ಯಾರಿಗುಂಟ್ಟು ಯಾರಿಗಿಲ್ಲ ಬೇಗ ಬನ್ನಿ ಬೇಗ ಬನ್ನಿ ಟಿಕೇಟು ಖಾಲಿಯಾಗಿಬಿಡುತ್ತೆ,," 
"ಇವತ್ತೆ ಡ್ರಾ.., ನಾಳೆನೇ ದುಡ್ಡು" ಎಂದು ಜನರನ್ನು ಸೆಳೆಯುತ್ತಿದ್ದನು.
ಅದಾಗ್ಯೂ ಕೆಲವೊಮ್ಮೆ ಉಳಿದೂ ಬಿಡ್ತಾ ಇತ್ತು, 
ಮುಂದೆ ದೇವರ ಮೇಲೆ ಭಾರ ಹಾಕಿ ಹೋಗೋದು, 
ಕೆಲವೊಮ್ಮೆ ನಷ್ಟ.., ಕೆಲವೊಮ್ಮೆ ಲಾಭ ಬರ್ತಾ ಇತ್ತು..! 
ಹೀಗೆ ಏಳು ಬೀಳುಗಳ ನಡುವೆ ಶಿವುನ ಜೀವನ ಸಾಗುತ್ತಿತ್ತು......!!


ತನ್ನ ಪ್ರತಿನಿತ್ಯದ ಬೆಳಗಿನ ಕಾಯಕವೇ ಅಂದಿನ ಡ್ರಾದ ಟಿಕೇಟುಗಳೆಷ್ಟಿವೆ..?? ಹೇಗೆ ಮಾರಾಟ ಮಾಡೋದು..?? ನಿನ್ನೆಯ ಫಲಿತಾಂಶದಲ್ಲಿ ಎಷ್ಟೆಷ್ಟು ಬಹುಮಾನ ಯಾರ್ಯಾರಿಗೆ ಬಂದಿದೆ,, ಅದನ್ನೆಲ್ಲಾ ಜನರಿಗೆ ತಿಳಿಸಿ ಮುಂದಿನ ಡ್ರಾದ ಟಿಕೇಟುಗಳನ್ನೇಗೆ ಮಾರಾಟ ಮಾಡಬೇಕೆಂದು ಅಲೋಚಿಸುವದಾಗಿತ್ತು.
ಅದಕ್ಕೆ ಎದುರುಗಡೆಯ ಬೇವಿನ ಮರವೇ ಸಾಕ್ಷಿಯಾಗ್ತಾ ಇತ್ತು.
ಯಾಕಂದ್ರೆ ಆ ಮರ ನೋಡ್ತಾನೇ ಯೋಚಿಸಬೇಕಾಗ್ತಾ ಇತ್ತಲ್ವಾ..? 
ಹೀಗೆ ಯೋಚಿಸುತ್ತಿರುವಾಗಲೇ ಕಳೆದ ಹದಿನೈದು ದಿನದಲ್ಲಿ ಮೂರ್ನಾಲ್ಕು ಬಾರಿ ಇವನ ಚಿತ್ತಚಾಂಚಲ್ಯವಾಗಿತ್ತು...!!! ನೋಡಿದರೆ ಏನೊಂದೂ.. ಯಾರನ್ನೂ ಕಾಣುತ್ತಿರಲಿಲ್ಲ..!


ಒಂದು ದಿನ ರಾತ್ರಿ ಇದರ ಬಗ್ಗೆ ಆಲೋಚಿಸಿದನು ಯಾಕೆ ಹೀಗಾಗ್ತ ಇದೆ.. ಯಾವಗ್ಲೂ ಹೀಗೆ ಆಗಿದ್ದಿಲ್ಲ... ಅದೇನೋ ಮಿಸ್ ಮಾಡ್ಕೋತಾ ಇದೀನಲ್ಲಾ..?? ಅದೇನು ನನ್ನ ಸೆಳೀತಾ ಇರೋದು ಅನ್ಕೊಂಡು ಇರಲಿ.. ನಾಳೆ ಅದೇನು ಆಗುತ್ತೋ ನೋಡೋಣ ಪೂರ್ತಿ ಎಚ್ಚರವಾಗೇ ಇರ್ತೀನಿ ಎಲ್ಲಾ ಕಡೆ ಗಮನಿಸ್ತಾನೇ ಇರ್ತೀನಿ.. ಅದೇನೂ ಅಂತಾ ನಾಳೆ ನನ್ನ ಮನಸಿನ ತಲ್ಲಣಕ್ಕೆ ಪರಿಹಾರ ಕಂಡುಹಿಡಿಯಲೇಬೇಕೆಂದು ತೀರ್ಮಾನಿಸಿ ನಿದ್ರೆಗೆ ಶರಣಾದನು..!!
(ಇಲ್ಲಿನ ಎಲ್ಲಾ ಚಿತ್ರಗಳ ಕೃಪೆ: 
Google Images ನಿಂದ)
ಮರುದಿನ ಬೆಳಿಗ್ಗೆ ಎಂದಿನಂತೆ ಎದ್ದು ಅಂಗಡಿಗೆ ಬಂದು ಸಿದ್ಧಮಾಡಿ ಕುಳಿತುಕೊಂಡನು.
ತುಂಬಾ ಎಚ್ಚರವಾಗೇ ಇದ್ದನು...
ವಿಶೇಷವಾದಂತದೇನೂ ಕಾಣಲಿಲ್ಲ ಹೀಗೆ ಮತ್ತೆ ೩-೪ ದಿನಗಳು ಕಳೆದವು ಐದನೇ ದಿನ ಮತ್ತದೇ ಚಿತ್ತಚಾಂಚಲ್ಯವಾದಂತೆ ಭಾಸವಾಗಿ ತಕ್ಷಣವೇ ಕತ್ತನ್ನು ಎಡಭಾಗಕ್ಕೆ ತಿರುಗಿಸಿದನು...
ಓಹೋ... ನನ್ನ ಮನಸಿನ ಚಂಚಲತೆಗೆ ಇದಾ ಕಾರಣ.....??? 
ಅಂತಾ ಹಾಗೇ ತದೇಕ ಚಿತ್ತದಿಂದ ಗಮನಿಸತೊಡಗಿದನು..!!


ಮುಂದುವರಿಯುವುದು............

ನಿಮ್ಮ ಟೀಕೆ-ಟಿಪ್ಪಣೆಯ ಅಬಿಪ್ರಾಯ(Comment)ಗಳನ್ನು ಓದಿ ತಿದ್ದಿಕೊಳ್ಳುವ ಅದೃಷ್ಠ ನನ್ನದಾಗಿರಲಿ, ಮರೆಯದೇ ನಿಮ್ಮ ಅಭಿಪ್ರಾಯವನ್ನು(Comment) ಬರೆಯಿರಿ...!!


ನಿಮ್ಮವ ♥ ♥
ಸವಿನೆನಪುಗಳು..!!

ಭಾನುವಾರ, ಫೆಬ್ರವರಿ 5, 2012

ಆ ರತಿಯೇ..... ಧರೆಗಿಳಿದಂತೆ....! ♥

3ನೇ ಭಾಗಕ್ಕಾಗಿ ಈ ಕೊಂಡಿ ಒತ್ತಿ:
http://bisilubeladinagalahudugi.blogspot.in/2011/12/blog-post_17.html


ತಾನು ನೆನಪಿಸಿಕೊಂಡ ಕಥೆಯ ಗುಂಗಿನಲ್ಲೇ ಇದ್ದ ಶಿವು..
ಅದರ ಬಗ್ಗೆ ಅವಲೋಕಿಸತೊಡಗಿದನು.,
ನಾನೂ ಆ ರೀತಿ ಮಾಡಲು ಸಾಧ್ಯವೇ..?? 
ನಾನೂ ಒಂದು ಸೇರು ಭತ್ತನಾ ಹೆಗಲಿಗೇರಿಸಿಕೊಂಡು ಹೊರಟು ಬಿಡ್ಲಾ..?
ಒಂದು ವೇಳೆ ಯಾರಾದ್ರೂ ನನ್ನ ಹಾಗೆ ಆ ಕಥೆನಾ ಓದಿಕೊಂಡಿದ್ದು ಅದೇ ಥರ ಮಾಡಿಬಿಟ್ರೆ..??
ನಾನು ಸರಿಯಾಗಿ ಪರೀಕ್ಷೆ ಮಾಡಿದ ಹಾಗೆ ಆಗುತ್ತಾ..?? 
ಆ ಕಥೆ ಓದ್ದೋರು ಯಾರು ಬೇಕಾದ್ರೂ ಆ ರೀತಿ ಆಡುಗೆ ಮಾಡಬಹುದಲ್ವಾ ..!??
ಆದ್ರೂ ಈ ಇಪ್ಪತ್ತೊಂದನೇ ಶತಮಾನದಲ್ಲಿ ಇದು ಸಾಧ್ಯಾನಾ..?? 
ಈಗಿನ ದಿನಸಿ ದರವೇನು..?? ಆಗಿನ ದರಗಳೇನು..??
ಅದೂ ಅಲ್ಲದೇ ಅವನೇನೋ ರೈತ, ಅದ್ಕೇ ಆ ರೀತಿ ಪರೀಕ್ಷೆ ಮಾಡಿದ..
ನಾನೇನು ರೈತಾನೇ..?? ನಾನೊಬ್ಬ ವ್ಯಾಪಾರಿ ನನಗೆ ಸರಿ ಹೊಂದೋ ಹುಡುಗಿನಾ ನಾನು ಆರಿಸಿಕೊಳ್ಳಬೇಕು..
ಮತ್ತೆ.. ನಾನೂ ನಗೆಪಾಟಲಿಗೀಡಾಗಬೇಕಾದೀತು ಎಂದೆನಿಸಿ ಆ ಕಥೆಯ ಸಹವಾಸವೇ ಬೇಡ ಬೇರೇನಾದ್ರೂ ಮಾರ್ಗೋಪಾಯಗಳನ್ನ ಹುಡುಕಿದರಾಯ್ತು ಎಂದುಕೊಂಡು ಆ ಕಥೆಯ ವಿಚಾರಕ್ಕೆ ಪೂರ್ಣ ವಿರಾಮವನಿಟ್ಟುಬಿಟ್ಟನು.


ಅದೊಂದು ದಿನ ಶಿವು ಎಂದಿನಂತೆ ಬೆಳಗಾಗೆದ್ದು ಮನೆ ಮುಂದಿನ ಕಟ್ಟೆಯ ಮೇಲೆ ಕುಳಿತು  ದಿನ ಪತ್ರಿಕೆಯ ಮೇಲೆ ಕಣ್ಣಾಡಿಸುತ್ತಿರುವಾಗ TV ಯಲ್ಲಿ ಬೆಳಗಿನ ಚಲನಚಿತ್ರ ಶುರುವಾಗುತ್ತಿತ್ತು.. ಸಮಯ ಬೆಳಿಗ್ಗೆ 7 ಘಂಟೆ.  
ಒಳಗಡೆ ಅಪ್ಪ ಅಮ್ಮ ಮಾತನಾಡುವ ಸದ್ದು ಕೇಳಿಸುತ್ತಿತ್ತು..
"ಯಾವ ಸಿನಿಮಾ ಹಾಕಿದಾರೇ" ಅಂತ ಕೇಳ್ತಾ ಇದ್ರು ಅಪ್ಪ..
'ಗಂಡೊಂದು ಹೆಣ್ಣಾರು'ಹಾಕಿದಾರೆ ನೋಡ್ರಿ."ಅಂದ್ರು ಅಮ್ಮ. ಆಗಲೇ ಶಿವು ಕಿವಿಗಳು ಚುರುಕಾದವು.,
"ಓಹೋ.. ರಾಜ್ ಕುಮಾರ್ ಪಿಚ್ಚರ್ ಅದು..ನಾನು ಆಗಲೇ ನೋಡಿದ್ದೇನೆ..ಬಹಳ ಚೆನ್ನಾಗಿದೆ" ಅಂದ್ರು ಅಪ್ಪ..
ಶಿವುಗೆ ಆಗಲೇ ಮನದಲ್ಲಿ ಗೊಂದಲ ಶುರುವಾಗಿತ್ತು.. ಇದೆಂಥಾ ಸಿನಿಮಾನಪ್ಪಾ ಒಂದು ಗಂಡಿಗೆ ಆರು ಹೆಣ್ಣಾ..??! ಅದೂ ಅಣ್ಣಾವ್ರದೂ,,!! ಹೇಗಿದೆ ನೋಡೋಣ ಅಂತಾ ಒಳಗಡೆ ಬಂದು ತಂದೆಯನ್ನ ಕೇಳಿದನು.. 
"ಏನಿದು ಗಂಡೊಂದು ಹೆಣ್ಣಾರು ಅಂದ್ರೆ.. ಒಂದು ಗಂಡಿಗೆ ಆರು ಹೆಣ್ಣಾ..??" ಕುತೂಹಲ ಭರಿತನಾಗಿ ಕೇಳ್ತಾನೆ..
ಅದ್ಕೇ ಅವರ ತಂದೆ ಜೋರಾಗಿ ನಕ್ಕು.. "ಲೇ,, ಗಂಡೊಂದು ಹೆಣ್ಣಾರು ಅಂದ್ರೆ ಒಂದು ಗಂಡು ಆರು ಹೆಣ್ಣಲ್ಲಲ್ಲೇ,, . ಒಂದು ಗಂಡಿಗೆ ಆರು ಗುಣಗಳುಳ್ಳ ಹೆಣ್ಣು ಸಿಗಬೇಕು ಅಂತಾ ಅರ್ಥ" ಅಂದ್ರು..
ಶಿವು ಇನ್ನೂ ಕುತೂಹಲದಿಂದ "ಹೌದಾ...!!?? ಯಾವ್ಯಾವ ಗುಣಗಳಯ್ಯಾ..??" ಅಂತಾ ಕೇಳ್ತಾನೆ.
ಅಲ್ಲಿ ಸಿನಿಮಾದಲ್ಲಿ ಹೇಳ್ತಾರೆ ನೋಡು.., ಬರ್ಕೋ ಹೋಗು ಅಂತಾ ಹೇಳಿದ್ರು.
ಸರಿ ಅಂತಾ ಇವನೂ ನೋಡೋಣ ಸ್ವಲ್ಪ ಹೊತ್ತು.., ಅಂಗಡಿಗೆ ಹೋಗೋಕೆ ಇನ್ನೂ ಸಮಯ ಇದೆಯಲ್ಲ ಅನ್ಕೊಂಡು.. ಪತ್ರಿಕೆ ಮಡಚಿಟ್ಟು ನೋಡಲು ಕುಳಿತನು..


Over To Film Seen.....


ಆಗ ತಾನೇ ಹೆಸರು ಮುಗಿದು ಚಿತ್ರ ಶುರುವಾಗಿತ್ತು,,
ರಾಜಣ್ಣ ಹಾಗೇ ಕಾರು ಓಡಿಸಿಕೊಂಡು ಬರ್ತಾ ಇರ್ತಾರೆ..
ದಾರಿ ಮಧ್ಯದಲ್ಲಿ ಕಾರಿಗೆ ಏನೋ ತೊಂದರೆಯಾಗಿ ನಿಂತು ಬಿಡುತ್ತೆ..
ಏನಾಗಿದೆ ಅಂತಾ ನೋಡಿ ಒಂದು ಕ್ಯಾನ್ ನಲ್ಲಿ ನೀರು ತರೋಕೆ ಅಂತಾ ಒಂದು ಮನೆ ಹತ್ರ ಬರ್ತಾರೆ..
ಇನ್ನೇನು ನೀರು ಕೇಳೋಣ ಅಂತಾ ಮನೆ ಮುಂದೆ ಬರ್ತಾರೆ ಆಗ್ಲೇ,, ತುಂಬಾ ತುಂಬಾ ವಯಸ್ಸಾದ ೯೦ ರ ಆಸು ಪಾಸಿನ ಅಜ್ಜ... ಅಜ್ಜಿ ಬಹಳ ಸಂತೋಷದಿಂದ ಕೇಕೆ ಹಾಕಿ ನಗ್ತಾ ಇರ್ತಾರೆ.. ಇದನ್ನು ನೋಡಿ ಅವಕ್ಕಾದ ರಾಜಣ್ಣ.. ಹಾಗೇ ಮರೆನಲ್ಲಿ ನಿಂತ್ಕೊಂಡು ಅವರ ಆನಂದವನ್ನು ಗಮನಿಸ್ತಾ ಇರ್ತಾರೆ... ಅವರು ಹಾಗೇ ಮಾತಾಡ್ತಾ ಇರಬೇಕಾದ್ರೆ ಯಾವುದೋ ಮಾತಿಗೆ ರಾಜಣ್ಣನಿಗೂ ಜೋರಾಗಿ ನಗು ಬಂದು ಹಾಗೇ.. ನಕ್ಕು ಬಿಡ್ತಾರೆ... 
ಆಗಲೇ ಆ ಅಜ್ಜ ಅಜ್ಜಿಗೆ ಗೊತ್ತಾಗಿದ್ದು ಯಾರೋ ಹೊರಗೆ ನಿಂತು ನಮ್ಮನ್ನ ಗಮನಿಸ್ತಾ ಇದಾರೆ ಅಂತಾ.. 
"ಯಾರದು ಬನ್ನಿ ಒಳಕ್ಕೆ" ಅಂತಾರೆ...
ಅಣ್ಣಾವ್ರು ಹಾಗೇ ನಗು ನಗುತ್ತಾ ಬಂದು... "ಏನಿಲ್ಲ ತಾತ,, ಕಾರಿಗೆ ಸ್ವಲ್ಪ ನೀರ್ ಬೇಕಾಗಿತ್ತು.. ಇಸ್ಕೊಂಡು ಹೋಗೋಣ ಅಂತಾ ಬಂದೆ ನಿಮ್ಮ ಖುಷಿ ನೋಡಿ ಅಲ್ಲೇ ನಿಂತ ಬಿಟ್ಟೇ...! :)
"ಅದು ಸರಿ,, ನೀವು ಈ  ವಯಸಿನಲ್ಲೂ ಇಷ್ಟೊಂದು ಸಂತೋಷವಾಗಿದ್ದೀರಲ್ಲಾ..? ಇದು ಹೇಗೆ..??
ನನ್ನ ಹತ್ರ ಹಣ ಆಸ್ತಿ ಎಲ್ಲಾ ಇದೆ.. ಆದ್ರೆ, ನೆಮ್ಮದಿ ಮಾತ್ರ ಇಲ್ಲ.. ನಿಮ್ಮ ಹಾಗೆ ಆನಂದ ವಾಗಿರೋದು ಹೇಗೆ ನಾನೂ" ಅಂತಾ ಕೇಳ್ತಾರೆ...
ಅದ್ಕೇ ತಾತ,, "ನೋಡಪ್ಪಾ..!!! ನೀನು ಸಂತೋಷವಾಗಿರಬೇಕೂ ಅಂದ್ರೆ ಒಂದು ಮದ್ವೇ ಮಾಡ್ಕೋ.. ಅದು ತನ್ನಿಂದ ತಾನೇ ಬರುತ್ತೆ" ಅಂತಾರೆ.... 
ಹೌದಾ..??!! ಮದ್ವೇನಲ್ಲಿ ಅಷ್ಟೊಂದು ಸಂತಸವಿದೆಯಾ ಸರಿ ನಾನು  ಮೊದ್ಲು ಹೋಗಿ ನಾಳೆನೇ ಮದ್ವೇ ಆಗ್ತೀನಿ" ಅಂತಾರೆ...
ಅದ್ಕೇ ತಾತ.. "ಇರಪ್ಪ.. ಮದುವೆ ಅಂದ್ರೆ.. ಯಾವುದ್ಯಾವುದೋ ಹುಡುಗಿನ ಮದ್ವೇ ಆದ್ರೆ ಆಗಲ್ಲ.. ಅವಳಿಗೆ ಆರು ಗುಣಗಳಿರಬೇಕು ಅಂತಾ ಹುಡುಗಿನಾ ನೀನ್ ಮದ್ವೇ ಆದ್ರೆ ನೀನು ಬಯಸೋ ಸುಖ,, ನೆಮ್ಮದಿ,, ಸಿಗುತ್ತೆ" ಅಂತಾರೆ.. 
"ಆ ಆರು ಗುಣಗಳು ಯಾವುದ್ಯಾವುದು ಅಂತಾ ಹೇಳಿ.."
"ಹೇಳ್ತೀನಿ ಬರ್ಕೋಳಪ್ಪಾ" 
ಪೆನ್ನು ಪೇಪರ್ ತಗೊಂಡು ಬರ್ಕೊಳ್ಳೋಕೆ ಶುರು ಮಾಡ್ತಾರೆ...
ತಾತಾ ಹೇಳ್ತಾರೆ.. 
1) "ರೂಪೇಚ ಲಕ್ಷ್ಮಿ... ನೋಡೋದಕ್ಕೆ ಲಕ್ಷ್ಮಿಯ ಹಾಗೆ ಮುಖಕಳೆ ಹೊಂದಿರಬೇಕು.."
2) "ಕಾರ್ಯೇಷು ದಾಸಿ.... ನಿನ್ನ ಮನೆ ಕೆಲಸ ಕಾರ್ಯಗಳಾನ್ನು ಸೇವಕಿಯಂತೆ ನಿಷ್ಟೇಯಿಂದ ನಿರ್ವಹಿಸಬೇಕು.."
3)"ಕರಣೇಷು ಮಂತ್ರಿ.... ಗೊಂದಲದ ಸಮಯದಲ್ಲಿ ಮಂತ್ರಿಯ ಹಾಗೆ ಸಲಹೆಗಳನ್ನು ನೀಡುವಂತಿರಬೇಕು.."
4)"ಭೋಜ್ಯೇಷು ಮಾತ... ತಾಯಿಯಷ್ಟೇ ಪ್ರೀತಿಯಿಂದ,, ಮಮತೆಯಿಂದ ಅಡುಗೆ ಮತ್ತು ಊಟ ಬಡಿಸುವವಳಾಗಿರಬೇಕು.."
5)"ಕ್ಷಮಯಾ ಧರಿತ್ರಿ... ಕೆಲವೊಂದು ಕಠಿಣ ಸಂದರ್ಭದಲ್ಲಿ ಭೂತಾಯಿಯ ಹಾಗೇ ಸಹನೆ ಕಳೆದುಕೊಳ್ಳದೇ.. ತಪ್ಪು ನಡೆದಿದ್ದರೂ.. ಕ್ಷಮಾ ಗುಣವನೊಂದಿರಬೇಕು.."
6)"ಶಯನೇಷು ವೇಶ್ಯೆ.... ಇದನ್ನ ನೀನೇ ಹೇಳೇ" ಅಂತಾರೇ ತಾತ...
ಅದ್ಕೇ ಅಜ್ಜಿ.. "ಹೇ,, ಹೋಗ್ರಿ,, ನೀವೇ ಹೇಳ್ರಿ" ಅಂತಾರೆ ಅಜ್ಜಿ...
ಆಗ ಅಣ್ಣಾವ್ರೂ.. "ಹ್ಹ ಹ್ಹ ಅರ್ಥ ಆಯ್ತು.. ಅರ್ಥ ಆಯ್ತು.. ಅವರಿಗ್ಯಾಕೆ ಸುಮ್ನೇ ತೊಂದ್ರೆ ನನಗರ್ಥವಾಯಿತು ಬಿಡಿ.". ಅಂತಾ ಅಂದು.. "ಅಲ್ಲಾ ತಾತ.. ನೀವು ಯಾವುದೋ ಕಾಲದ ಹುಡುಗಿ ಬಗ್ಗೆ ಹೇಳ್ತಾ ಇದೀರಿ.. ಈ ೨೦ನೇ  ಶತಮಾನದಲ್ಲಿ ಇಂಥಾ ಹುಡ್ಗೀರ್ ಸಿಗ್ತಾರ..?? ಇದು ಆಗೋ ಮಾತಲ್ಲ ಬಿಡಿ" ಅಂತಾರೆ..
"ಯಾಕ್ ಆಗೋದಿಲ್ಲಪ್ಪಾ.. ಎಲ್ಲಾ ಕಾಲದಲ್ಲೂ ಇರ್ತಾರೆ.. ಹುಡುಕೋ ತಾಳ್ಮೆ ಇಅರಬೇಕು ಅಷ್ಟೇ.. ಹುಡುಕು.. ಸಿಕ್ಕೇ ಸಿಗ್ತಾಳೆ ಅಂತಾ ಹುಡುಗಿನೇ ನೀನು ಮದುವೆ ಆಗು" ಅಂತಾರೆ ತಾತ..
"ಸರಿ ತಾತ ನೀವು ಹೇಳಿದ ಈ ಗುಣ ಗಳಿರೋ ಹುಡುಗಿ ಸಿಗ್ಲಿ ಅಂತಾ ಇಬ್ರೂ ಆಶೀರ್ವಾದ ಮಾಡಿ.. ಅಂತಾ ಹುಡುಗಿನೇ ಹುಡುಕಿ ಮದ್ವೇ ಆಗಿ ನಿಮ್ಮ ಆಶೀರ್ವಾದ ಪಡೇಯೋಕೆ ಬರ್ತೀನಿ.." ಅಂತಾ ಹೇಳಿ ಅವರ ಕಡೆಯಿಂದ ನೀರು ಪಡೆದುಕೊಂಡು ಹೊರಟರು ನಮ್ಮ ರಾಜಣ್ಣ..


ಮುಂದೆ ಸಾಕಷ್ಟು ಪರೀಕ್ಷೆ ಮಾಡಿ.. ಹಲವು ತೊಂದರೆಗಳನ್ನ ಎದುರಿಸಿ ಅಂತಾ ಹುಡುಗಿನೇ ಮದ್ವೇ ಆಗಿ ಅಜ್ಜ ಅಜ್ಜಿ ಹತ್ರ ಆಶೀರ್ವಾದ ಪಡೆಯೋಕೆ ಗಂಡ ಹೆಂಡತಿ ಇಬ್ರೂ ಬರ್ತಾರೆ,, ಆದ್ರೆ,, ಅದಾಗಲೇ ಅವರು ಕಾಲವಾಗಿಬಿಟ್ಟಿರುತ್ತಾರೆ.. (ಪೂರ್ತಿ ಕಥೆನಾ ಸಿನಿಮಾದಲ್ಲಿ ನೋಡಿ..)


(ಇಲ್ಲಿನ ಎಲ್ಲಾ ಚಿತ್ರಗಳ ಕೃಪೆ: 
Google Images ನಿಂದ)
ತದೇಕ ಚಿತ್ತದಿಂದ ಎಲ್ಲಾ ಮರೆತು ಸಿನಿಮಾ ನೋಡುತ್ತಾ ಕುಳಿತಿದ್ದ  ಶಿವು ಸಮಯ ನೋಡ್ತಾನೇ ಆಗಲೇ 10ಘಂಟೆ..!!!
ಅಯ್ಯೋ...!! ಎಷ್ಟೊತ್ತಗಿಬಿಡ್ತಾಲ್ಲ ಅನ್ಕೊಂಡು ತಡಾಬಡಾಯಿಸಿ ಎದ್ದು..  20 ನಿಮಿಷದಲ್ಲಿ ತಯಾರಾಗಿ.. ತಿಂಡಿ ತಿನ್ನದೇ ಆತುರಾತುರವಾಗಿ ವ್ಯಾಪರಕ್ಕೆ ಹೊರಡಲನುವಾದನು...
ಮುಗ್ಧಮನಸಿನ ಶಿವು ಮನಸಲ್ಲೇ ಆರು ಗುಣಗಳ ಹುಡುಗಿ ಬಗ್ಗೆ ಕಲ್ಪನೆ ಮಾಡಿಕೊಳ್ಳುತ್ತಾ ಜೀವನ ಬಂಡಿ ಸಾಗಿಸಲು ಸೈಕಲ್ ಮೇಲೆ ಸಾಗುತ್ತಿದ್ದನು... ಆಗಲೇ ಮನದ ಮೂಲೆಯಿಂದ ಎಚ್ಚರಿಕೆಯ ಧ್ವನಿಯಂತೆ ತೆಳುವಾಗಿ ಕೇಳಿಸುತ್ತಿತ್ತು...


 "ಆರು ಗುಣಗಳ ಆ ರತಿ.,
 ಮಾಡಿದರೆ ನಿನಗಾರತಿ.,
 ಬರುವುದೊಳ್ಳೆ ಕೀರುತಿ.
 ಕೇಳುವಳಾಗೊಂದು ಮೂಗುತಿ.,
 ತರದಿದ್ದರೇ ನೀನವಳ ಕೈಯಿಂದ..
 ಜಾರುತಿ., ಜಾರುತಿ., ಜಾರುತಿ..!" :))



ಮುಂದುವರಿಯುವುದು.........

ನಿಮ್ಮ ಟೀಕೆ-ಟಿಪ್ಪಣೆಯ ಅಬಿಪ್ರಾಯ(Comment)ಹಾಕ್ತೀರಲ್ಲಾ..? ಮರೀಬೇಡಿ...!

ನಿಮ್ಮವ ♥ ♥ 
ಸವಿನೆನಪುಗಳು..!

ಶನಿವಾರ, ಡಿಸೆಂಬರ್ 17, 2011

ಅರಸಿ..ಅರಸಿ.. ಮನದರಸಿಯನ್ನರಸಿ....♥



ಹಿಂದಿನ ಭಾಗಕ್ಕಾಗಿ ಈ ಕೊಂಡಿ ಕ್ಲಿಕ್ಕಿಸಿ:  http://bisilubeladinagalahudugi.blogspot.com/2011/12/blog-post.html


"ಅರಳಿದ ಕುಸುಮವು ಪರಿಮಳ ಬೀರುವಂತೆ..
ಅರಳಿದ ನವಿರುಭಾವಗಳು ಸುಮ್ಮನಿರುವವೇ..??
ಖಾಲಿ ಖಾಲಿ ಮನಸಿಗೆ ನೂರು ನೂರು ಕನಸುಗಳು
ತುಂಬಿಕೊಳ್ಳತೊಡಗುತ್ತವೆ..
ಆಗಲೇ ವಿಚಾರ ಲಹರಿವೂ ಅಲೆ-ಅಲೆಯಾಗಿ ಮನದ ದಡಕ್ಕೆ ಅಪ್ಪಳಿಸುತ್ತವೆ."

ಶಿವುನ ವಿಚಾರದಲ್ಲೂ ಹೀಗೆ ಆಯಿತು.. (ಆಗಲೇ ಬೇಕಲ್ಲ)
ಹಾಗೇ ಒಂದು ದಿನ ತನ್ನ ಮನಸಲ್ಲಿ ಆಲೋಚಿಸತೊಡಗಿದನು..
"ನನ್ನ 'ಬಾಳ ಸಂಗಾತಿ'ಯನ್ನು ನಾನು ಹೇಗೆ ಆಯ್ಕೆಮಾಡಿಕೊಳ್ಳಬೇಕು..??
'ಒಂದು ವೇಳೆ ನಾನು ಹುಡುಗಿ ನೋಡೋದಿಕ್ಕೆ ಅಂತಾ ಹೋದ್ರೆ,

ಬರೀ ಅವಳ ಮುಖ ನೋಡಿದರೆ ಸಾಕೆ..??
ಅವಳು ನನ್ನ ಜೊತೆ ಹೇಗೆ ಹೊಂದಿಕೊಳ್ಳುತ್ತಾಳೋ ಏನೋ..??
ನನ್ನ ಹಾಗೇ ಸರಳವಾಗಿರದೇ ನನಗೆ ಅದು ಬೇಕು, 
ಇದು ಬೇಕು ಎಂದು ಆಡಂಬರದ ಬದುಕು ಅವಳದಾದರೇನು ಮಾಡುವುದು..??
ಮೊದಲೇ ನಾನು 'ಬದುಕಲು ಢವ ಢವ ಎಂದು ಎದೆ ಹೊಡೆದುಕೊಳ್ಳುವಷ್ಟು
ಬಡವ' ದಿನನಿತ್ಯ ದುಡಿದರೇನೆ ಊಟ ನಮ್ಮದು ಅಂತಾದ್ರಲ್ಲಿ,
ನಾ ದುಡಿದ್ದದ್ದೆಲ್ಲಾ ಅವಳು ಹ್ಯಾಗ್ಯಾಗೋ ಖರ್ಚು ಮಾಡುವವಳಾದರೇನು
ಮಾಡುವುದು..???
ಆಗ ನನ್ನ ಜೀವನ ಸುಖಮಯವಾಗದೇ., ನರಕವಾಗಿಬಿಟ್ಟರೇ...??' :o
ಜೀವನದಲ್ಲಿ ಒಮ್ಮೆ ಮಾತ್ರ ಮದುವೆ ಆಗೋದು ಅದ್ಕೇ ನಿಧಾನಕ್ಕೆ,
ತಾಳ್ಮೆಯಿಂದ ಪರೀಕ್ಷಿಸಿ ಹೆಣ್ಣನ್ನು ಒಪ್ಪಿಕೊಳ್ಳಬೇಕೆಂದುಕೊಂಡನು..!"
ಆದ್ರೆ,, 'ಪರೀಕ್ಶಿಸುವ ವಿಧಾನಗಳು ಬೇಕಲ್ಲವೇ..? ಅವನ್ನೆಲ್ಲಿಂದ ಕಂಡುಹಿಡಿಯೋದು..?
ನೋಡೋಣ..!!' ಇನ್ನೂ ನಂಗೆ ವಯಸ್ಸು ಚಿಕ್ಕದು ಇನ್ನೂ 2-3 ವರ್ಷದೊಳಗೆ ಅದಕ್ಕೆಲ್ಲಾ ಉತ್ತರ ಕಂಡುಕೊಂಡರಾಯ್ತು ಎಂದು ಸುಮ್ಮನಾದನು..


ಮನದಲ್ಲಿ ಆಲೋಚನೆ ಮೊಳಕೆಯೊಡೆದರೆ ಸುಮ್ಮನಿರುತ್ತದೆಯೇ..??
ಸುಪ್ತಮನಸು ಅದರ ಬಗ್ಗೆ ಸದಾ ಜಾಗೃತವಾಗೇ ಇರುತ್ತೇ.
ನಮ್ಮ ನಮ್ಮ ಕೆಲಸದಲ್ಲಿ ಮುಳುಗಿದ್ದರೂ ಅದು ಬಿಡದು... 
ಮದುವೆಯಾಗೋ ಹುಡುಗಿಯ ಬಗೆಗಿನ ವಿಚಾರ 
'ಮರಕುಟಿಗ'ನ ಹಾಗೇ ಸದಾ ಇವನ ತಲೆಯಲ್ಲಿ  ಕೊರೀತಾನೇ ಇತ್ತು..

ಆಗಾಗ ಕೆಲವು ಮಾತುಗಳೂ ಇವನ ಗಮನದಲ್ಲಿ ಹಾದು ಹೋಗಿದ್ದವು
"ಕುಲ ನೋಡಿ ಹೆಣ್ಣು ತರಬೇಕು,, ಜಲ ಶೋಧಿಸಿ ನೀರು ತರಬೇಕು.."
"ಒಂದು ಒಳ್ಳೆ ಹೆಣ್ಣು ಹುಡುಕಬೇಕಾದ್ರೆ 3 ಜೋಡು ಮೆಟ್ಟು ಹರಿತ್ತಿದ್ವಂತೆ"
ಹೀಗೆ ಇಷ್ಟೊಂದು ಕಷ್ಟವೇ ಹೆಣ್ಣು ಹುಡುಕೋದು ಎಂದು ಆಶ್ಚರ್ಯಚಕಿತನಾಗಿದ್ದನು.


ಹೀಗಿರಲೊಂದು ದಿನ ಅವನು ಎಂದೋ ಓದಿದ ಒಂದು ಪುಸ್ತಕದಲ್ಲಿನ ಕಥೆ ನೆನಪಾಯ್ತು..!
ಆ ಕಥೆಯಲ್ಲಿ ಒಬ್ಬ ವ್ಯಕ್ತಿ ತನ್ನ ಮನೆ, ಕುಟುಂಬ ವನ್ನು ಸರಿಯಾಗಿ ನೋಡಿಕೊಳ್ಳುವ ವಧುವನ್ನು ಅರಸಿ.
ಒಂದು ಸೇರು ಭತ್ತವನ್ನ ಒಂದು ಬಟ್ಟೆಯಲ್ಲಿ ಗಂಟು ಕಟ್ಟಿಕೊಂಡು ಕನ್ಯಾನ್ವೇಷಣೆಗಾಗಿ ಪ್ರಯಾಣ ಬೆಳೆಸುತ್ತಾನೆ..!
ಅವನು  ಹೋಗುವ ಪ್ರತಿ ಮನೆಯಲ್ಲೂ ಅವನದು ಒಂದೇ ಷರತ್ತು..
"ತಾನು ತಂದಿರುವ ಈ ಒಂದು ಸೇರು ಭತ್ತದಲ್ಲೇ ಊಟಕ್ಕೆ ಬೇಕಾದ ಎಲ್ಲಾ ಸಿದ್ಧತೆಯನ್ನೂ ಮಾಡಿ ಈತನಿಗೆ ಊಟಕ್ಕೆ ಬಡಿಸಬೇಕಾಗಿತ್ತು, ಅದರ ಮಿಕ್ಕಿ ಒಂದು ನಯಾ ಪೈಸೆ ಬೇರೆಕಡೆಯಿಂದ ಪಡೀಬಾರದು.."
ಈತ ಹೋದಕಡೆಯಲ್ಲೆಲ್ಲಾ ಎಲ್ಲಾ ಹೆಣ್ಣುಮಕ್ಕಳು 'ಅದಾಗದ ಮಾತೆಂದೇ' ಕಳಿಸಿಬಿಡುತ್ತಿದ್ದರು..!
ಕೆಲವು ಕಡೆ ಇವನೂ ಅಪಹಾಸ್ಯಕ್ಕೂ ಗುರಿಯಾದನು,.
"ಅಲ್ಲಾ..! ಬರೀ ಭತ್ತ ಕೊಟ್ಟು,, ಇವನು ತನ್ನ ಊಟಕ್ಕೆ ಬೇಕಾದ ಅನ್ನ , ಸಾರು,, ಪಲ್ಯ, ಮೊಸರು, ಎಲ್ಲಿಂದ ತರಬೇಕೆಪ್ಪಾ..? ಇವನಿಗೆ ಆ ಜನ್ಮದಲ್ಲಿ ಮದುವೆನೇ ಆಗಲ್ಲ" ಎಂದು ಗೇಲಿ ಮಾಡಿದರು..
ಆದರೂ ಇವನು ತನ್ನ ಪ್ರಯತ್ನ ಬಿಡಲಿಲ್ಲ,,


ಕೊನೆಗೆ ಒಂದು ಊರಲ್ಲಿ 'ಸುಮತಿ' ಎನ್ನೋ ಹುಡುಗಿ ಇವನ ಷರತ್ತುಗಳಿಗೆ ಒಪ್ಪಿ ಅಡುಗೆ ಮಾಡಿ ಬಡಿಸುವದಾಗಿ ಒಪ್ಪಿಕೊಂಡಳು, ಇವನಿಗೆ ಸಂತಸವಾಗಿ ಹುಡುಗಿಯ ತಂದೆಯ ಕೋರಿಕೆಯ ಮೇರೆಗೆ ಅವರ ಮನೆಗೆ ಹೋಗಿ ಮತ್ತೊಮ್ಮೆ ಆ ಹುಡುಗಿಗೆ ಎಲ್ಲವನ್ನೂ ವಿವರಿಸಿದನು, ಅವಳೂ ಅಷ್ಟೇ "ಸರಿ ನೀವು ಮಧ್ಯಾಹ್ನ ಊಟದ ಸಮಯಕ್ಕೆ ಸರಿಯಾಗಿ ಬಂದು ಬಿಡಿ ಎಂದು ಹೇಳಿ ಅಡುಗೆ ಸಿದ್ಧತೆ ಮಾಡಲು ಹೋದಳು..!" ಇವನು ಹೊರಟು ಮಧ್ಯಾಹ್ನ ಸಮಯಕ್ಕೆ ಸರಿಯಾಗಿ ಊಟಕ್ಕೆ ಬಂದನು.
ಇವಳು ತನ್ನ ಮಾತಿನಂತೆ ಅನ್ನ. ಸಾರು, ಪಲ್ಯ, ಮೊಸರು ಸಿದ್ಧಪಡಿಸಿ ಇಟ್ಟಿದ್ದಳು, ಅವನು ಊಟವೆಲ್ಲಾ ಮಾಡಿದನು, ಊಟವೂ ಒಳ್ಲೆ ರುಚಿಕರವಾಗಿತ್ತು,,! 
ಊಟವಾದ ಮೇಲೆ ಇವನು ಅವಳನ್ನು ಕೇಳುತ್ತಾನೆ,
ಅಲ್ಲಾ ರೀ ..! "ನಾನು ಎಷ್ಟೋ ಕಡೆ ಕೇಳಿದರೂ ಮಾಡೋಕೆ ಆಗೋದೆ ಇಲ್ಲ ಎಂದೇ ಎಲ್ರೂ ನನ್ನ ವಾಪಾಸು ಕಳಿಸಿದರು, ನೀವು ಇದನ್ನ ಹ್ಯಾಗೇ ಮಾಡಿದ್ರಿ" ಎಂದು ಕೇಳುತ್ತಾನೆ.
ಅದಕ್ಕೆ ಅವಳು ಹೇಳುತ್ತಾಳೆ "ನೀವು ಕೊಟ್ಟ ಭತ್ತವನ್ನು ಮೊದಲು ಕುಟ್ಟಿದೆನು. ಅದರಲ್ಲಿ ಅಕ್ಕಿ.., ನುಚ್ಚಕ್ಕಿ.., ತೌಡು (ಭತ್ತದ ಹೊಟ್ಟು) ಬಂದವು, ಅದನ್ನು ಚಪ್ಪರಿಸಿ, ಅಕ್ಕಿ ಮತ್ತು ನುಚ್ಚು, ಭತ್ತದ ತೌಡು ಬೇರೆ ಮಾಡಿದೆನು. ಅಕ್ಕಿನಾ ತೊಳೆದು ಅನ್ನಕ್ಕೆ ಇಟ್ಟೆ, ತೌಡು ತೆಗೆದುಕೊಂಡು ಹೋಗಿ ನಮ್ಮ ಪಕ್ಕದ ಮನೆಯ ಹಸುವಿಗೆ ಕೊಟ್ಟೆ ಆ ಮನೆಯವರು ಅದಕ್ಕೆ ಬದಲಾಗಿ ಮೊಸರನ್ನು ಕೊಟ್ಟರು. ಇನ್ನು ನುಚ್ಚು ಅದನ್ನು ನಮ್ಮ ಊರಿನ ಶೆಟ್ರು ಅಂಗಡಿ ಹೋಗಿ ಮಾರಿದೆ.
(ಇಲ್ಲಿನ ಎಲ್ಲಾ ಚಿತ್ರಗಳ ಕೃಪೆ Google ನಿಂದ)
ಆತ ಕೊಟ್ಟ ಹಣದಲ್ಲಿ ಅವನ ಬಳಿಯೇ ಸಾರಿಗೆ ಬೇಕಾದ ಪದಾರ್ಥಕೊಂಡು, ಹಾಗೇ ಬರುವಾಗ ಮಾರುಕಟ್ಟೆಯಲ್ಲಿ ಮಿಕ್ಕಿದ ಹಣದಲ್ಲಿ ಎಲ್ಲಾ ತರಕಾರಿ ತಂದು ಪಲ್ಯಮಾಡಿದೆ ಅಷ್ಟೇ"ಎಂದಳು..! ..!
ಈಗ ಅವನಿಗೆ ತುಂಬಾ ಸಂತಸವಾಯಿತು,,! ಒಂದು ಪದಾರ್ಥವನ್ನು ಹಲವು ಮಾದರಿಯಲ್ಲಿ ಬಳಸಿ ಸ್ವಲ್ಪ ಕೂಡ ವ್ಯರ್ಥ ಮಾಡದೇ ಸರಿಯಾಗಿ ನಿಭಾಯಿಸಿದಳು ಇವಳು ತನ್ನ ಬದುಕನ್ನು ನಡೆಸಲು ಸಮರ್ಥಳೆಂದು ನಿರ್ಧರಿಸಿದನು
ಮುಂದೆ ಸರಳ ರೀತಿಯಲ್ಲಿ ಗುರು-ಹಿರಿಯರ ಸಮ್ಮುಖದಲ್ಲಿ  ಅವರಿಬ್ಬರ ವಿವಾಹವೂ ಜರುಗುತ್ತದೆ..!"


ಅಬ್ಬಾಬ್ಬಬ್ಬಬ್ಬ್ಬ..!! ಮದುವೆಗೆ ಇಷ್ಟೆಲ್ಲಾ ದೊಡ್ಡ ಕಥೆ ಇದೇಯಾ ಅಂತಾ ಅನ್ಕೊಂಡು ಹಾಗೇ  ನೆನಪಿನಿಂದ ವಾಸ್ತವಕ್ಕೆ ಬಂದ ಶಿವು ಮನಸಾರೆನಕ್ಕು ಬಿಟ್ಟನು..!:)


ಮುಂದುವರಿಯುವುದು.........


ನಿಮ್ಮ ಟೀಕೆ-ಟಿಪ್ಪಣೆ (Comment) ಹಾಕೋದ್ ಮರೀಯೋದಿಲ್ಲ ತಾನೇ..??
ಮತ್ತೆ...??? ಬೇಗ ನಿಮ್ಮ ಮನದಭಿಪ್ರಾಯವನ್ನಿಲ್ಲಿ ಮೂಡಿಸಿಬಿಡಿ..! :)
ಮತ್ತೆ ಭೇಟಿಯಾಗೋಣ...?
ನಿಮ್ಮವ ♥ ♥ 
ಸವಿನೆನಪುಗಳು..!


ಸೋಮವಾರ, ಡಿಸೆಂಬರ್ 5, 2011

ಜೀವನವೇ ಸುಖ ಪಯಣ....??



ಆರಂಭಿಕ ಲೇಖನಕ್ಕಾಗಿ ಈ ಕೊಂಡಿ ಕ್ಲಿಕ್ಕಿಸಿ: http://bisilubeladinagalahudugi.blogspot.com/2011/11/blog-post.html


ಒಂದಾನೊಂದು ಕಾಲದಲ್ಲಿ....!! 
ವಿಜಯನಗರವೆಂಬ ಸಾಮ್ರಾಜ್ಯದಲ್ಲಿ..!! 
ಹ್ಮ್ಮ್..!! ಹ್ಹ ಹ್ಹ ಯಾಕೋ ಇದು ಸ್ವಲ್ಪ ಅತಿಯಾಯ್ತು ಅನಿಸುತ್ತೇ ಅಲ್ವೇ,,?? 
ಬೇಡಬಿಡಿ..! ಅಷ್ಟು ಹಿಂದಕ್ಕೆ ಹೋಗೋದೇನೂ ಬೇಡ..!


ಸುಮಾರು 8 ವರ್ಷಗಳ ಹಿಂದೆ 'ವಿಜಯನಗರ' ಎಂಬ ನಗರದಲ್ಲಿ.

ಶಿವು ಎಂಬ ಯುವಕನಿದ್ದನು.!
ಸದ್ಯ ತನ್ನ ಇಬ್ಬರ ತಮ್ಮಂದಿರು., ತಂದೆ ತಾಯಿಯೊಂದಿಗೆ .. 
ಕಷ್ಟಪಟ್ಟು Lease ಹಾಕಿಸಿಕೊಂಡಿರುವ ಮನೆಯಲ್ಲಿ ವಾಸವಾಗಿದ್ದನು...! 
ಇದ್ದ ಒಬ್ಬ ಅಕ್ಕನನ್ನು ಅದಾಗಲೇ 'ಮದುವೆ' ಮಾಡಿಕೊಟ್ಟಾಗಿತ್ತು..!


ಅವರ ಮನೆಯವು  12 ಜನರ ತುಂಬು ಕುಟುಂಬವಾಗಿದ್ದರೂ ಮನೆಯಲ್ಲಿ ಕಿತ್ತು ತಿನ್ನುವ ಬಡತನದ ಕಾರಣ ಕೆಲವರು ನಯವಾಗಿ ಜಾರಿಕೊಳ್ಳುತ್ತ ಕುಂಟುಂಬದಿಂದ ದೂರವಾಗುಳಿದಿದ್ದರು.
ಸದ್ಯಕ್ಕೀಗ ಮನೆಯಲ್ಲಿರುವುದೀ 5 ಜನ ಮಾತ್ರ., 
ತಂದೆಗೆ ಸ್ವಲ್ಪ ಅನಾರೋಗ್ಯದ ಕಾರಣ ಮನೆಯಲ್ಲೇ ಇರುತ್ತಿದ್ದರು. 
ಅವರಿಗೆ ಬಿಸಿಲೆಂದರಾಗದು,, 
ಇನ್ನು ತಾಯಿ ಮನೆಕೆಲಸ ಮಾಡುವದರಲ್ಲೇ ಸುಸ್ತಾಗಿರುತ್ತಾರೆ.!
ತಮ್ಮನೊಬ್ಬ ರೂ.೬೦೦ ರ ತಿಂಗಳ ಸಂಬಳಕ್ಕೆ ಅಂಗಡಿಕೆಲಸಕ್ಕೆ ಹೋಗುತ್ತಿದ್ದನು, 
ಇನ್ನೊಬ್ಬ ತಮ್ಮನು  ಸ್ವಲ್ಪ ಮಂದಬುದ್ದಿಯ ಕಾರಣ ಕೆಲಸಕ್ಕೆಲ್ಲೂ ಹೋಗದೇ ಮನೆಯಲ್ಲೇ ಸಣ್ಣಪುಟ್ಟ ಕೆಲಸಮಾಡಿಕೊಂಡು ಇರುತ್ತಿದ್ದನು..!
ಹಾಗಾಗಿ., ಮನೆಯ ಕುಟುಂಬದ ಸಂಪೂರ್ಣ ಹೊಣೆ ಈ 'ಶಿವು' ಮೇಲೆಯೇ..!


ಬಡತನಕ್ಕೆ ನೂರೆಂಟು ಕಷ್ಟ ಅನ್ನೋ ಹಾಗೆ, ಓದು ತಕ್ಕಮಟ್ಟಿಗೆ ನಡೆದಿತ್ತು, 
'ಓದು ಒಕ್ಕಾಲು.. ಬುದ್ಧಿ ಮುಕ್ಕಾಲು' ಎನ್ನೋ ಸಿದ್ಧಾಂತವನ್ನು ನಂಬಿ ಯಾರಿಗೂ ತೊಂದರೆ ಕೊಡದೆ ಶಕ್ತಿ ಇರುವವರೆಗೂ ಓದಿ, ವ್ಯವಹಾರಕ್ಕೆ ನಿಂತಿದ್ದನು..
ತನ್ನ ತಂದೆಯವರ ಉದ್ಯೋಗವೇಯಾದ 'ಸರ್ಕಾರದ ಲಾಟರಿ ಟಿಕೇಟು ಮಾರಟ'ದ ಕೆಲಸವನ್ನೇ ಇವನು ಮುಂದುವರಿಸಿಕೊಂಡು ಹೊರಟಿದ್ದನು.! 
ಬರೋ ಅಲ್ಪ-ಸ್ವಲ್ಪ ಆದಾಯದಲ್ಲೇ ತೃಪ್ತಿಯಿಂದ ಜೀವನ ನಡೆಸುತ್ತಿದ್ದನು,,
ಕನಸುಗಳು ನೂರಾರಿದ್ದರೂ,, ಎಲ್ಲವನ್ನೂ ಬದಿಗೊತ್ತಿ,, ಸಂಸಾರದ ನೊಗವನ್ನು ಹೊತ್ತು ಸಾಗಿದ್ದನು.


ತನ್ನ ಬುದ್ದಿಮತ್ತೆಯಿಂದ ತನ್ನ ವ್ಯವಹಾರದಲ್ಲಿ ಹಂತ-ಹಂತವಾಗಿ ಬೆಳೆಯುತ್ತ ಸಾಗಿದನು,
ಮೊದಲೆಲ್ಲಾ ಬಸ್ ನಿಲ್ದಾಣ.., ಮಾರ್ಕೆಟ್.., ರೈಲ್ವೇ ನಿಲ್ದಾಣ.., ಹೀಗೆ ಜನಸಂದಣಿ ಇರೋಕಡೆಯೆಲ್ಲೆಲ್ಲಾ ಬೀದಿ ಬೀದಿ. ಓಡಾಡಿ ವ್ಯಾಪರ ಮಾಡುತ್ತಿದ್ದ ಇವನು ಸ್ವಲ್ಪ ಆಲೋಚಿಸಿ, ಒಂದು ಪುಟ್ಟ ಅಂಗಡಿ ಮಾಡಿದರೆ ಲೇಸೆಂದು ತಿಳಿದು ನಾಲ್ಕು ಹಾದಿ ಕೂಡುವ ಮಧ್ಯ ಒಂದು ಪೆಟ್ರೋಲ್ ಬಂಕ್ ಬಳಿ 'ಬೀದಿ ಬದಿ'ಯ ಒಳ್ಳೆ ಜಾಗವನ್ನು ನೋಡಿ ಅಲ್ಲಿ ವ್ಯಾಪಾರ ಮಾಡುವದೆಂದು ನಿಶ್ಚಯಿಸಿ
ಆ ಜಾಗಕ್ಕೆ ಹೊಂದುವಂತೆ ಒಂದು Table ಮಾಡಿಸಿ ಒಂದೊಳ್ಳೆ ದಿನ ಶುರು ಮಾಡಿಯೇಬಿಟ್ಟನು.(ರಾತ್ರಿಯಾದರೆ ಆ Table ಸಮೇತ ಮನೆಗೆ ಬರಬೇಕು)


ಆರಂಭದಲ್ಲಿ  ವ್ಯಾಪಾರ ಅಷ್ಟಾಗಿ ನಡೆಯದಿದ್ದರೂ ಕಾಲ ಕ್ರಮೇಣ ವ್ಯಾಪಾರ ಕುದುರುತ ಬಂದಿತು. 
ನಿಧಾನಕ್ಕೆ  ಜನರೆಲ್ಲಾ ಇವನನ್ನು ಗುರುತಿಸುವಂತಾದರು.
ಇವನ ಮುಖಲಕ್ಷಣ.., ಮಾತಿನ ವೈಖರಿಯೇ ಹಾಗಿತ್ತು,
ಗ್ರಾಹಕರೆಲ್ಲಾ ಇವನ ಮುಖದ ಕಳೆ ನೋಡಿಯೇ ಬರ ಹತ್ತಿದ್ದರು,,
ನಿಷ್ಠೆಯಿಂದ ಕೆಲಸ ಮಾಡಿದರೆ ಯಾವುದೂ ಅಸಾಧ್ಯವಿಲ್ಲವೆಂಬಂತೆ.
ಇವನು ಮಾರಟ ಮಾಡುತ್ತಿದ್ದು ಟಿಕೇಟುಗಳಲ್ಲಿ ದೇವರ ಕೃಪೆಯಿಂದ ಆಗಾಗ 'ಬಹುಮಾನ'ಗಳೂ ಲಭಿಸತೊಡಗಿದವು..
ಗ್ರಾಹಕರೂ ಸಂತುಷ್ಟರಾಗಹತ್ತಿದರೂ,, 
ಹೀಗೆ ಬಾಯಿಂದ ಬಾಯಿಗೆ ಹರಡಿ ಇವನ ಆ 'ಬೀದಿ ಬದಿಯ ಪುಟ್ಟ ಅಂಗಡಿ'
ತಕ್ಕಮಟ್ಟಿಗೆ ಹೆಸರು ಪಡೆಯಿತು.


ಇವನ ಸನ್ನಡತೆಯಿಂದಾಗಿ ಸುತ್ತಮುತ್ತಲಿನ ಜನರ ಆತ್ಮೀಯ ಸ್ನೇಹವನ್ನೂ., ವಿಶ್ವಾಸವನ್ನೂ ಸಂಪಾದಿಸಿದನು, 
ಈಗ ಸ್ವಲ್ಪ ನೆಮ್ಮದಿಯ ಜೀವನ ಸಾಗ ಹತ್ತಿತು..


ಇಂತಿಪ್ಪ ಜೀವನ ಪಯಣ ಸಾಗಿರಲು ಇವನ ಕನಸುಗಳು ಗರಿಗೆದರತೊಡಗಿದವು,,
ತಾನೂ ಒಂದು ಮನೆಯನ್ನು ಕಟ್ಟಿಸಬೇಕು.., ಸಮಾಜದಲ್ಲಿ ಒಳ್ಳೆ ಸ್ಥಾನಮಾನಪಡೆಯಬೇಕು.., ಎಲ್ಲರೂ ಗೌರವಿಸುವಂತಾಗಬೇಕು..,
ಎಂದು ಆಸೆಯನ್ನು ಹೊತ್ತು 
ಅದೇ ರೀತಿ ತನ್ನ ಬದುಕನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಜಾಗ್ರತೆಯಿಂದ ಹೆಜ್ಜೆ ಇಡಹತ್ತಿದನು..
ಮೊದಲ ಬಾರಿಗೆ ಬ್ಯಾಂಕ್ ನಲ್ಲಿ ಉಳಿತಾಯ ಖಾತೆಯನ್ನು ಆರಂಭಿಸಿ ಸ್ವಲ್ಪ ಹಣವನ್ನೂ ಉಳಿಸಹತ್ತಿದನು....! (ಬಹಳ ಏನೂ ಅಲ್ಲ ದಿನಕ್ಕೆ ರೂ.ಇಪ್ಪತ್ತರಂತೆ ಮಾತ್ರ)
"ಮಾತನಾಡುವುದೇ ಸಾಧನೆಯಾಗದೇ, ಸಾಧನೆಯೇ ಮಾತನಾಡಬೇಕೆಂದು" ನಿರ್ಧರಿಸಿ.
ಮಾತು ಕಡಿಮೆ ಕೆಲಸ ಹೆಚ್ಚು ಎಂಬಂತಾಯಿತು..


ಹೀಗೆ ಸಾಗಿರುವಾಗ ಇವನಿಗೆ ೨೦ ವರ್ಷಗಳು ತುಂಬಿದ್ದವು..
ಅಕ್ಕ-ಪಕ್ಕದ ಮನೆಯವರು ಇವನ ತಂದೆಗೆ "ಏನಪ್ಪಾ..!!?? ಇನ್ನೇನು ಹುಡುಗ ವಯಸ್ಸಿಗೆ ಬಂದ ಮದುವೆ ಮಾಡೋದಿಲ್ವೇನು..??" ಎಂದರು. 
"ಅಯ್ಯೋ..!! ಈಗಿನ್ನೂ ವಯಸ್ಸು ಚಿಕ್ಕದು ಇನ್ನೂ ಸ್ವಲ್ಪ ದಿನ ಹೋಗಲಿ ಬಿಡಿ ನೋಡಿದರಾಯ್ತು" ಎಂದು ಉತ್ತರಿಸಿದರು ಇವನ ತಂದೆ.
ಅಲ್ಲಾ.. ಸ್ವಾಮಿ.., ನೀವು ಚೆಂದ ಹೇಳಿದ್ರಿ.. ಈಗ ನೋಡಿದ ಕೂಡಲೇ ಎಲ್ಲಾ ಆಗಿ ಹೋಗಿಬಿಡುತ್ತೇನು..,??
ನಮ್ಮ ಪ್ರಯತ್ನ ನಾವು ಮಾಡಬೇಕಲ್ಲವೇ..? ಈಗಿಂದ ಶುರು ಹಚ್ಚ್ಕೊಂಡ್ರೆ ಅಲ್ಲಿಗ್ ಬರುತ್ತೇ,, ಬೇಗ ಈಗಿಂದಲೇ ನೋಡೋಕ್ ಶುರುಮಾಡಿ ಎಂದರು.,
ಅದು ಸರಿನೇ.., ನೋಡೋಣ ಎಂದೇಳಿ ಮೌನವಾದರು ಶಿವು ತಂದೆ.


ಶಿವು ಮಧ್ಯಾಹ್ನ ಮನೆಗೆ ಊಟಕ್ಕೆ ಬಂದನು, 
ಊಟವಾದಮೇಲೆ ತಂದೆ ಇವನ ಬಳಿ ಬಂದು ಮದುವೆ ವಿಚಾರವನ್ನೆತ್ತಿದರು. 
ಶಿವಣ್ಣಾ...! ಎಲ್ರೂ ಹೀಗ್ ಹೇಳ್ತಾ ಇದ್ದಾರೆ,, ಮದ್ವೆ ಆಗೋಕೆ ನೀ ಸಿದ್ಧನಾ ಎಂದರು..?
ಒಂದು ಕ್ಷಣ ಇವನು ಗಲಿಬಿಲಿ ಗೊಂಡನು ಇವನು ತಿಳಿದ ಪ್ರಕಾರ ಮದುವೆಗೆ ಗಂಡಿಗೆ 21 ಹೆಣ್ಣಿಗೆ 18 ತುಂಬಿರಬೇಕು, ಆದರೆ ನನಗಿನ್ನೂ 20 ನಡೀತಾ ಇದೆ. ಇದೇನು ಇವರು ಈಗಲೇ ಮದ್ವೇ ಬಗ್ಗೆ ಮಾತಾಡ್ತಾ ಇದಾರೆ,
ಇನ್ನೂ ನಾನೊಂದು ಹಂತಕ್ಕೆ ಬೆಳೆದಿಲ್ಲ.,
ಹೆಂಡತಿಯನ್ನು ನೋಡಿಕೊಳ್ಳವ ಸಾಮಾರ್ಥ್ಯ ನನಗೆ ಬಂದಿದೆಯೇ..?
ಏನೇ ಆಗಲಿ ಈಗಲೇ ಮದ್ವೇ ಆಗಬಾರದೆಂದು ಆಲೋಚಿಸಿ,,!
"ಏನು..?? ಇಷ್ಟು ಬೇಗನಾ..? ನಂಗಂತೂ ಈಗ್ಲೇ ಮದ್ವೇ ಬೇಡ"ವೆಂದು ಹೇಳಿದನು..!
"ಅಲ್ಲೋ.., ತಮ್ಮಾ.., ಈಗಲೇ ಅಂತಾ ಅಲ್ಲ ಈಗ್ಲಿಂದ ಹೆಣ್ಣು ನೋಡೋಕೆ ಶುರು ಮಾಡಿದ್ರೆ ಅಲ್ಲಿಗೆ ಬರುತ್ತೆ,, 2-3 ವರ್ಷ ಆಗಬಹುದು ಎಂದರು ತಂದೆ.
ಅದಕ್ಕವನು.. "ಅದೇನೋ ಸರಿಯಯ್ಯಾ..,(ಅಪ್ಪನಿಗೆ ಅಯ್ಯ ಅಂತಾರೆ) ಆದ್ರೆ ನೋಡಿದ ಕೂಡಲೇ ಅವರು ಒಪ್ಪಿಬಿಟ್ರೆ ಹಾಗೇನ್ ಮಾಡ್ತೀರಿ ಎಂದನು..? 
ಏನೇ ಹೇಳಿ ನಾನಂತೂ ಈಗ್ಲೇ ಮದ್ವೆಗೆ ಒಪ್ಪಲ್ಲ" ಅಂದು ಬಿಟ್ಟನು..!
ಹೌದು..! ಅದೇನೋ ನಿಜಾನೇ ಎಂದರಿತು ಹೆಚ್ಚು ಒತ್ತಾಯ ಮಾಡದೇ ತಂದೆಯೂ ಸುಮ್ಮನಾಗಿಬಿಟ್ಟರು..!


(ಇಲ್ಲಿನ ಎಲ್ಲಾ ಚಿತ್ರಗಳ ಕೃಪೆ Google ನಿಂದ)
ಇದೇ ಮೊದಲ ಕ್ಷಣ ಇವನಲ್ಲಿ ನವಿರು ಭಾವನೆಗಳು ಅರಳಲನುವಾದವು..
ಹೌದಲ್ಲಾ..? ಮುಂದೆ ನಾನೂ ಮದ್ವೇಯಾಗೋನು..
ಹೇಗೆಲ್ಲಾ ಬಾಳಬೇಕು,, ಹೆಂಡತಿಯಾಗಿ ಬರೋಳ ಜೊತೆ ಹ್ಯಾಗೆಲ್ಲಾ ಇರಬೇಕು..?
ಈ ಮದುವೆ ಎಂದರೆ ಏನು..? ಯಾಕೆ..? ಅಂತೆಲ್ಲಾ ನೂರೆಂಟು ಯೋಚನೆಗಳನ್ನ ಮನದ ತುಂಬಾ ತುಂಬಿಕೊಂಡನು..!

ಮುಂದುವರಿಯುವುದು..............


ಇವತ್ತಿಗೆ ಇಷ್ಟು ಸಾಕಲ್ವ..? ಮತ್ತೆ ಸಿಗೋಣ...? 
ಅಂದ ಹಾಗೆ ಮರೆತಿದ್ದೆ..! ತಪ್ಪಿರಲಿ,, ಒಪ್ಪಿರಲಿ.. ನಿಮ್ಮ ಮನದಭಿಪ್ರಾಯವಿಲ್ಲಿ ತಪ್ಪದೇ ಮೂಡಿಬರಲಿ..! ಅಂದ್ರೇ Comment ಹಾಕೋದ್ ಮರೀಬ್ಯಾಡ್ರಿ ಅಂದೆ..! :)

ನಿಮ್ಮವ ♥ ♥ 
ಸವಿನೆನಪುಗಳು..!


ಭಾನುವಾರ, ನವೆಂಬರ್ 6, 2011

ಇಲ್ಲಿಂದ ಆರಂಭವೋ.....!! ♥ ♥



ಹದಿಹರೆಯದ ವಯಸಿನಲ್ಲಿ ನವ ತಾರುಣ್ಯಕ್ಕೆ ಅಡಿಯಿಡುವ ಸಂದರ್ಭದಲ್ಲಿ,

ಪ್ರತಿಯೋರ್ವರು ಒಂದಿಲ್ಲೊಂದು ರೀತಿಯಲ್ಲಿ ಪ್ರೀತಿಯ ಸಿಂಚನವನ್ನು ಪಡೆದೇ ಇರುತ್ತಾರೆ. 

ಒಬ್ಬೊಬ್ಬರದೂ ಒಂದೊಂದು ರೀತಿಯ ಪ್ರೇಮಕಥೆಯಾಗಿರುತ್ತದೆ.
ಕೆಲವು ಹೋಲಿಕೆಗಳಿರಬಹುದು,, ಇನ್ನೂ ಕೆಲವು ತುಂಬಾನೇ ವಿಭಿನ್ನವಾಗಿರುತ್ತವೆ. 
ಏನೇ ಆದರೂ., ಅವರವರ ಪ್ರೇಮಕಥೆ ಅವರವರಿಗೆ ವಿಭಿನ್ನವಾಗೇ,, ಶ್ರೇಷ್ಠವಾಗೇ ಕಾಣಿಸುತ್ತದೆ,
ಒಂದು ಪ್ರೀತಿಯು ಹುಟ್ಟಬೇಕಾದರೆ ಅದಕ್ಕೆ ಹಲವಾರು ಕಾರಣಗಳಿರುತ್ತವೆ. 
ಯಾವುದೋ ಒಂದು ಕಾರಣ ದಿಂದ.., ಯಾವುದೋ ಒಂದು ಸಂದರ್ಭದಲ್ಲಿ.., ಯಾವುದೋ ಒಂದು ಕ್ಷಣದಲ್ಲಿ.. 
ನಮಗರಿವಿಲ್ಲದೇ ನಮ್ಮ ಮನಸಲ್ಲಿ ಪ್ರೀತಿ ಮೊಳಕೆಯೊಡೆದು ಬಿಟ್ಟಿರುತ್ತದೆ, ,
ಅದು ಬೆಳೀತಾ.. ಬೆಳಿತಾ ಹಲವು ರೂಪಗಳಲ್ಲಿ ಅಭಿವ್ಯಕ್ತಿ ಗೊಳ್ಳುತ್ತಾ ಸಾಗುತ್ತದೆ.


ಒಂದು ರೀತಿಯಲ್ಲಿ ವಯೋಮಾನ ಸಹಜವಾದ ಆಕರ್ಷಣೆಯೇ ಪ್ರೀತಿಯ ಹುಟ್ಟಿಗೆ ಕಾರಣವಾಗಬಹುದು..

ಹದಿಹರೆಯದ ವಯಸಿನಾಕರ್ಷಣೆಗರಳಿದ ಪ್ರೇಮ ಫಲಿಸುವುದು ತುಂಬಾ ವಿರಳವೇ ಅನಿಸುತ್ತೆ.
ಸ್ವಲ್ಪ ಪ್ರಬುದ್ಧತೆಯ ಹಂತದಲ್ಲಿ ಹುಟ್ಟಿದ ಪ್ರೇಮ ಫಲಿಸುವ ಸಾಧ್ಯತೆ ಹೆಚ್ಚಿದ್ದರೂ ಕಾರಣಾಂತರಗಳಿಂದ ಅದರಲ್ಲೂ ವಿಫಲತೆಯ  ಅಂಶವನ್ನೂ ತಳ್ಳಿಹಾಕುವಂತಿಲ್ಲ..!  ಆದರೂ..,  ಪ್ರೀತಿ ಒಂದು ಮಾಯೆ ಎಂದುಕೊಳ್ಳುವವರೇ ಅತಿ ಹೆಚ್ಚು ಜನ,,!
ಇಷ್ಟಾದ್ರೂ ನನ್ನ ಒಂದು ಮಾತು ಅಂತೂ ಅಪ್ಪಟ ಸತ್ಯ 
"ಕಣ್ಣಲ್ ಹುಟ್ಟೋ ಪ್ರೀತಿ  'ಕಣ್ಮರೆ'ಯಾಗೋತನಕ..,
ಮನಸಲ್ಲ್ ಹುಟ್ಟೋ ಪ್ರೀತಿ 'ಹೃದಯದ ಬಡಿತ' ನಿಲ್ಲೋ ತನಕ" ♥ ♥


ಈ ಪ್ರೀತಿ-ಪ್ರೇಮಗಳಲ್ಲಿ ಸಿಲುಕಿದ ಪ್ರತಿಯೊಬ್ಬರೂ ಅದರ ಆಳ-ಅಗಲದ ಅನುಭವವೇನೆಂದು ಅರಿತಿರುತ್ತಾರೆ..
ಯಾರಾದರಾಗಲಿ ಈ ಪ್ರೀತಿಯ ಸುಳಿಯಲ್ಲಿ ಸಿಕ್ಕಿಹಾಕಿಕೊಂಡರೇ..
ಅದರಿಂದಾಚೆ ಬರುವುದು ಬಹು ಕಷ್ಟಸಾಧ್ಯವಾದ ಮಾತೇನೋ..?
ಪ್ರೀತಿಯ ಅಮಲಿನಲ್ಲಿರುವವರಿಗೆ ತಮ್ಮದೇ ಪ್ರೇಮಲೋಕ,,.
ಅಕ್ಕ-ಪಕ್ಕ., ಸುತ್ತ-ಮುತ್ತ.., ಯಾರಿಹರೆಂಬ ಪರಿವೇ ಇಲ್ಲದೇ
ತಮ್ಮದೇ ಕಲ್ಪನಾ ಕಲೋಕದಲ್ಲಿ ತೇಲಾಡುತ್ತಿರುತ್ತಾರೆ.. :)
ಊಟ.., ನಿದ್ರೆ.. ತಮ್ಮ ಕೆಲಸ..,ಇದಾವುದರ ಬಗೆಗೂ ಗಮನವಿರುವುದಿಲ್ಲ..
ಇನ್ನೂ ಹೆಚ್ಚೆಂದರೆ 'ಹಗಲು-ರಾತ್ರಿ'ಗಳಾದರೂ ಯಾವುದೆಂಬುದರರಿವು ಬಾರದೇ ಹೋಗಿಬಿಡುತ್ತದೆ..
ಏಕೆಂದರೆ.., ಪ್ರೀತಿಸುವ ಪ್ರೇಮಿಗಳಿಗೆ ಪ್ರತಿ ನಿತ್ಯ.. ಪ್ರತಿ ಕ್ಷಣ.., ಪ್ರೀತಿಸುತ್ತಿರುವವರದೇ ಧ್ಯಾನ..


"ಬಯಸಿದೊಲವು ಬಯಕೆಯಂತೆ ಜೊತೆಗೂಡಿ ಸಾಗಲು
ಪ್ರಜ್ವಲಿಸುವ ನೇಸರನ ಸುಡುಬಿಸಿಲಿನ ಕಿರಣಗಳೂ.,
ಸದಾ ತಂಪನ್ನೀಯುವ 'ಪೂರ್ಣಚಂದ್ರ'ನ ತಂಪು ಬೆಳದಿಂಗಳಿದ್ದಂತೆ"


ಒಂದೊಮ್ಮೆ ಇದೇ ಪ್ರೀತಿ ಕೈಗೆ ಸಿಗದೇ 'ನಿಲುಕದ ನಕ್ಷತ್ರ'ದಂತಾದರೆ..??
"ಬಯಸಿದೊಲವು ಬಯಕೆಯಂತೆ ಜೊತೆ ಬಾರದಿರಲು
ಸದಾ ತಂಪನ್ನೀಯುವ 'ಪೂರ್ಣಚಂದ್ರ'ನ ತಂಪು ಬೆಳದಿಂಗಳೂ ಸಹ
'ಪ್ರೇಮಿಗಳ ಪ್ರೇಮದ ವಿರಹದುರಿಯ ಯಾತನೆಗೆ'
ಝಗಮಗಿಸುವ ಕಡು ಬೇಸಿಗೆಯ ರವಿತೇಜನ ಕಿರಣಗಳಂತೆ
ಮೈ-ಮನ ಸುಡುವ ಬಿಸಿಲಿನಂತಾಗುತ್ತದೆ"

ಅದ್ಕೇ ಹೇಳೋದು ಪ್ರೀತಿ ಮಾಯೆ ಹುಷಾರು.., ಕಣ್ಣೀರ್ ಮಾರೋ ಬಜಾರು ಅಂತಾ.. :)


(ಇಲ್ಲಿನ ಎಲ್ಲಾ ಚಿತ್ರಗಳ ಕೃಪೆ Google ನಿಂದ)
ಎಲ್ಲೋ ಹುಟ್ಟಿ.., ಎಲ್ಲೋ ಬೆಳೆವ.. ಎರಡು ಹೃದಯಗಳ ಸಂಗಮವಾಗುವದಾದರೂ ಹೇಗೆ..??
ಈ ಹೃದಯ ಆ ಹೃದಯಕ್ಕೇ ಮೀಸಲು ಎಂಬ ಭಾವನೆ ಮೂಡುವದಾದರೂ ಹೇಗೆ..??
ಎಷ್ಟೋ ಕೋಟಿ ಕೋಟಿ ಜನರಿರುವ ಜಗದಲ್ಲಿ ನಿರ್ಧಿಷ್ಟವಾದ ಆ ಎರಡು ಹೃದಯಗಳ ನಡುವಿನ ಆಂತರಿಕ ಸೆಳೆತವೇನು..??
ಎತ್ತಣ ಮಾಮರ..? ಎತ್ತಣ ಕೋಗಿಲೆ..?  ಎಂಬ ಕವಿವಾಣಿಯಂತೆ ಇದಲ್ಲವೇ ಋಣಾನುಬಂಧ..??


ಇದೇ ಮಾದರಿಯಲ್ಲಿ ನನ್ನೀ ಕಥೆಯ ಎರಡು ಹೃದಯಗಳು ಹೇಗೆ ಸೇರುತ್ತವೆ..??
ಆ ಎರಡು 'ಹೃದಯಗಳ ಸಂಗಮ'ಕ್ಕೆ ನನ್ನೀ 'ಒಲವಿನಕ್ಷರಗಳ ಸೇತುವೆ' ಹೇಗಾಗುತ್ತೆ ಎಂಬುದ ಕಾದು ನೋಡಿ..!
ಓದಿ ಅನಂದಿಸಿ.., ಅನುಭವಿಸಿ.. ತಪ್ಪಿರಲಿ,, ಒಪ್ಪಿರಲಿ.. ನಿಮ್ಮ ಮನದಭಿಪ್ರಾಯವಿಲ್ಲಿ ತಪ್ಪದೇ ಮೂಡಿಬರಲಿ..

ಅಂದ ಹಾಗೆ ನಾನೀ ಕಥೆಯಲ್ಲಿ ಬಳಸುವ ವ್ಯಕ್ತಿಯ ಹೆಸರುಗಳಾಗಲಿ..,
ಕಥೆಯ ಸನ್ನಿವೇಶಗಳಾಗಲಿ.., ಕೇವಲ ಕಾಲ್ಪನಿಕ.
ಯಾರಿಗೂ.. ಯಾವುದಕ್ಕೂ ಸಂಬಂಧಪಟ್ಟಿರುವುದಿಲ್ಲ
ಹಾಗೊಂದು ವೇಳೆ ಹೋಲಿಕೆ ಕಂಡುಬಂದಲ್ಲಿ ಅದೊಂದು ಕಾಕತಾಳೀಯವಷ್ಟೇ. (Co Incidence)


ಮುಂದಿನ ಭಾಗದಲ್ಲಿ ಮತ್ತೆ ಸಿಗೋಣ.:) ಕಾಯ್ತಾ ಇರ್ತೀರಲ್ಲಾ..? ನಿಮ್ಮ Heart ಜೋಪಾನ..! ♥


ಪ್ರೋತ್ಸಾಹವಿರಲಿ.., 
ನಿಮ್ಮವ ♥ ♥ 
ಸವಿನೆನಪುಗಳು..!!